Chiranth Prakashana Online Book Store

Sale!

ಕೊನೆಯ ಮುಘಲ್ ಸಾಮ್ರಾಟನ ಅಂತಿಮ ದಿನಗಳು / Koneya Mughal Samratana Antima Dinagalu

225.00

Name of the Author – ಉದಯಕುಮಾರ್ ಹಬ್ಬು
Publisher – ಸಿ ವಿ ಜಿ ಇಂಡಿಯಾ
Year of Publishing – 2022
Printing Number – 1
Cover Page – ಸಾದಾ
Pages – 250
Book Size – ⅛
ISBN –

Category:

(For purchase of Rs 299/-and above)

About the Book  and Author

ಕಳೆದ ವರ್ಷ ದಾರಾ ಶುಕೋಹನ ಕುರಿತು ಒಂದು ಅಪರೂಪದ ಕಾದಂಬರಿಯನ್ನು ಕೊಟ್ಟಿದ್ದ ಉದಯಕುಮಾರ ಹಬ್ಬು ಅವರು ಈಗ ಮುಘಲ್ ಸಾಮ್ರಾಟ್ ಬಹದ್ದೂರಶಾಹನ ಅಂತಿಮ ದಿನಗಳೊಂದಿಗೆ 1875ರ ಪ್ರಸಿದ್ಧ ಐತಿಹಾಸಿಕ ದಂಗೆಯ ಸನ್ನಿವೇಶಗಳನ್ನೂ ಒಳಗೊಂಡಂತೆ ಅಂದಿನ ಭಾರತದ ವಾತಾವರಣವನ್ನು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸುವ ಈ ಕಾದಂಬರಿಯನ್ನು ನಮ್ಮ ಕೈಗೆ ಕೊಟ್ಟಿದ್ದಾರೆ. ಐತಿಹಾಸಿಕ ಕಾದಂಬರಿ ಬರೆಯುವುದು ಬಹಳ ದೊಡ್ಡ ಜವಾಬ್ದಾರಿಯ ಕೆಲಸ. ಕಾದಂಬರಿಕಾರನ ಸತ್ವಪರೀಕ್ಷೆ ಮಾಡುವ ಕೆಲಸ. ಆಳವಾದ ಅಧ್ಯಯನವನ್ನು ಅದು ನಿರೀಕ್ಷಿಸುತ್ತದೆ. ಆದರೆ ಐತಿಹಾಸಿಕ ಅಂಶಗಳೊಡನೆ ಕಾದಂಬರಿಕಾರನ ಕಲ್ಪನಾ ಶಕ್ತಿಗೂ ಕೆಲಸ ಕೊಡುವಂತಹ ಸಂಗತಿ. ಕನ್ನಡದಲ್ಲಿ ಐತಿಹಾಸಿಕ ಕಾದಂಬರಿಗಳಿಗೆ ಒಂದು ಪ್ರತ್ಯೇಕ ಸಮೃದ್ಧ ಇತಿಹಾಸವೇ ಇದೆ. ಬಂಗಾಲಿ ಭಾಷೆಯ ಐತಿಹಾಸಿಕ ಕಾದಂಬರಿಗಳ ಅನುವಾದದೊಡನೆಯೇ ಕನ್ನಡದಲ್ಲಿ ಕಾದಂಬರಿಯುಗ ಆರಂಭವಾಯಿತು. ಗಳಗನಾಥ, ಬಿ. ವೆಂಕಟಾಚಾರ್ಯರಿಂದ ಹಿಡಿದು ಕೊರಟಿ ಶ್ರೀನಿವಾಸರಾವ್, ವೀರಕೇಸರಿ ಸೀತಾರಾಮ ಶಾಸ್ತ್ರಿ, ಅನಕೃ, ತರಾಸು, ಬಸವರಾಜ ಕಟ್ಟೀಮನಿ ಮೊದಲಾದವರ ತನಕ ಅಸಂಖ್ಯಾತ ಬರೆಹಗಾರರು ಉತ್ತಮ ಐತಿಹಾಸಿಕ ಕಾದಂಬರಿಗಳನ್ನು ನೀಡಿದ್ದಾರೆ. ಇತ್ತೀಚೆಗೂ ನಮ್ಮ ಹೊಸ ಬರೆಹಗಾರರು ಸಶಕ್ತ ಐತಿಹಾಸಿಕ ಕಾದಂಬರಿಗಳನ್ನು ಬರೆಯುತ್ತಿರುವದು ಗಮನಾರ್ಹ.

ಪ್ರಸ್ತುತ ಕಾದಂಬರಿಯ ಕಥಾವಸ್ತುವಿನ ಆಯ್ಕೆಯಲ್ಲಿ ಮಹತ್ವವಿದೆ. ಬಹದ್ದೂರಶಾಹ ದಿಲ್ಲಿಯ ದೊರೆಯಾಗಿಯೂ ಬ್ರಿಟಿಷರ ಗುಲಾಮನಾಗಿಯೇ ದುರಂತ ಬದುಕು ಕಂಡ. ಯಾವ ದೃಷ್ಟಿಯಿಂದಲೂ ರಾಜನಾಗಲು ಯೋಗ್ಯನಲ್ಲದವ. ಆಡಳಿತದ ಮೇಲೆ ಅವನಿಗೆ ಯಾವ ಹಿಡಿತವೂ ಇರಲಿಲ್ಲ. ಮಹಾರಸಿಕ, ಸ್ತ್ರೀಲೋಲ, ಕವಿ, ಅವನ ಪ್ರಪಂಚವೇ ಬೇರೆ. ಮನಸ್ಸಿಲ್ಲದ ಮನಸ್ಸಿನಿಂದಲೇ ಅಧಿಕಾರ ಸೂತ್ರ ಹಿಡಿದುಕೊಂಡವ. ಇಂತಹ ಒಬ್ಬ ದುರ್ಬಲ ದೊರೆಯ ಅವಧಿಯಲ್ಲಿಯೇ ಬ್ರಿಟಿಷ್ ಸೇನೆಯಲ್ಲಿ ದಂಗೆ ಏಳುತ್ತದೆ. ಅನಪೇಕ್ಷಿತವಾಗಿ ಝಫರ್ ಅದರಲ್ಲಿ ಸಿಕ್ಕುಬೀಳುತ್ತಾನೆ. ಭಾರತದ ಸ್ವಾತಂತ್ರ್ಯ ಹೋರಾಟದ 1857ರ ಮಹಾದಂಗೆ ಝಾಫರನ ಬದುಕಿನಲ್ಲೂ ಮಹಾವಿಪ್ಲವಕ್ಕೆ ಕಾರಣವಾಗುತ್ತದೆ. ಬ್ರಿಟಿಷರ ಬಂಧನದಲ್ಲಿ ಸಿಲುಕಿ ಜೈಲಿನಲ್ಲೇ ಕೊನೆಯುಸಿರೆಳೆಯುತ್ತಾನೆ.

ಇಲ್ಲಿ ಕಾದಂಬರಿಯ ಕತೆ ಮೂರು ಮುಖವಾಗಿ ಹರಿಯುವುದನ್ನು ಕಾಣಬಹುದಾಗಿದೆ. ಕೊನೆಯ ಮುಘಲ್ ದೊರೆಯ ಬದುಕಿನ ಚಿತ್ರಣ. 1857ರ ಸಿಪಾಹಿ ದಂಗೆ. ಬ್ರಿಟಿಷರ ಒಡೆದಾಳುವ ರಾಜನೀತಿಯ ಸ್ವರೂಪ. ಈ ಮೂರೂ ಸಂಗತಿಗಳ ಹೊಂದಾಣಿಕೆಯೊಡನೆ ಸಾಗುವ ಕತೆ ಆ ಕಾಲದ ಹತ್ತು-ಹಲವು ಸಂಗತಿಗಳನ್ನು ಮತ್ತು ಅಂದಿನ ವಾತಾವರಣವನ್ನು ಸಾಕಷ್ಟು ವಿವರವಾಗಿ ನಮ್ಮೆದುರು ಇಡುವ ಕೆಲಸ ಮಾಡುತ್ತದೆ. ” ಝಫರ್ ಮತ್ತು ದಿಲ್ಲಿ” ಎಂಬ ಏಳನೇ ಅಧ್ಯಾಯದ ಮೊದಲ ವಾಕ್ಯವನ್ನು ಗಮನಿಸಬಹುದು- ”ಬ್ರಿಟಿಷರು ಮತ್ತು ಮುಘಲರು ಬೇರೆ ಬೇರೆ ಮಾನಸಿಕ ಜಗತ್ತಿನಲ್ಲಿ ವಾಸಿಸುತ್ತಿದ್ದರು. ಅಷ್ಟು ಮಾತ್ರವಲ್ಲ, ಬೇರೆ ಬೇರೆ ಕಾಲಗಳಲ್ಲಿ ಬದುಕುತ್ತಿದ್ದರು.” ಆ ಇಡೀ ಅಧ್ಯಾಯ ನಮ್ಮ ಕುತೂಹಲ ಕೆರಳಿಸುವಂತೆ ಚಿತ್ರಿತವಾಗಿದೆ. ವಿಷಯ ಸಂಗ್ರಹಿಸುವುದು ಮಹತ್ವವಲ್ಲ. ಅದನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುವುದು ಮಹತ್ವದ್ದು. ಅಂದಿನ ಆ ಕಾಲದಲ್ಲಿ ಜನಜೀವನ ಹೇಗಿತ್ತು ಎಂದು ತಿಳಿಯಬಯಸುವವರಿಗೆ ಸಾಕಷ್ಟು ಮಾಹಿತಿಗಳನ್ನು ಈ ಪುಸ್ತಕ ಒದಗಿಸಿಕೊಡುತ್ತದೆ. ಪರಿಸ್ಥಿತಿಯ ಕೈಗೊಂಬೆಯಾಗಿ ತನ್ನದಲ್ಲದ ಬದುಕನ್ನು ಬದುಕಬೇಕಾದ ಅಸಹಾಯಕ ದೊರೆಯಾಗಿ, ದುರಂತ ನಾಯಕನಾಗಿ, ಬಂದೀಖಾನೆಯ ಗೋಡೆಯ ಮೇಲೆ ಗಝಲ್ ಗಳನ್ನು ಬರೆಯುತ್ತಲೇ ಕೊನೆಯುಸಿರೆಳೆಯುವ ಝಾಪರ್ ನ ಕರುಣಾಜನಕ ಅಂತ್ಯ ನಮ್ಮ ಮನಸ್ಸನ್ನು ಕಲಕದೆ ಬಿಡಲಾರದು.

220 ಪುಟಗಳಲ್ಲಿ ಹರಡಿಕೊಂಡ ಕಾದಂಬರಿ ಇತಿಹಾಸ ಪ್ರಿಯರನ್ನು ಖುಷಿಪಡಿಸುವಂತಿದೆ. ಉದಯಕುಮಾರ ಹಬ್ಬು ಅವರ ಈ ವಿಶಿಷ್ಟ ಪ್ರಯತ್ನಕ್ಕಾಗಿ ಅವರನ್ನು ಅಭಿನಂದಿಸಬೇಕಾಗಿದೆ. ಮುಂದಿನ ದಿನಗಳಲ್ಲಿ ಅವರು ಇದೇ ರೀತಿ ಇತಿಹಾಸದ ಇನ್ನಷ್ಟು ಹೊಸ ಪುಟಗಳನ್ನು ತೆರೆದಿಡಲಿ ಎಂದು ಆಶಿಸುತ್ತೇನೆ‌.

  • ಎಲ್. ಎಸ್. ಶಾಸ್ತ್ರಿ

Reviews

There are no reviews yet.

Be the first to review “ಕೊನೆಯ ಮುಘಲ್ ಸಾಮ್ರಾಟನ ಅಂತಿಮ ದಿನಗಳು / Koneya Mughal Samratana Antima Dinagalu”

Your email address will not be published.

Related Books

Shopping Cart
Translate »
Open chat
ನಮಸ್ತೆ ಸಹೃದಯರೇ,
ಇಂದು ಯಾವ ಪುಸ್ತಕವನ್ನು ಖರೀದಿಸಲು ಬಯಸುವಿರಿ....?

For Bulk Orders / Trade Discounts Call +918660966208